ನಾಗಸಂಪಿಗೆ
ಗಟಿಫೆರೀ ಕುಟುಂಬಕ್ಕೆ ಸೇರಿದ ಒಂದು ಸುಂದರ ವೃಕ್ಷ. ಮೆಸುವ ಫೆರಿಯ ಇದರ ಶಾಸ್ತ್ರೀಯ ನಾಮ. ನಾಗಕೇಸರಿ ಪರ್ಯಾಯ ನಾಮ. ಇಂಗ್ಲಿಷಿನಲ್ಲಿ ಇದಕ್ಕೆ ಐರನ್‍ವುಡ್ ಎಂಬ ಹೆಸರುಂಟು. ಇದರ ಚೌಬೀನೆ ಬಲುಗಟ್ಟಿಯಾಗಿರುವುದರಿಂದ ಈ ಹೆಸರು ಬಂದಿರಬೇಕು. ಇದು ಮಧ್ಯಮ ಗಾತ್ರದ ಮರ; ಉಷ್ಣವಲಯ ದೇಶಗಳಲ್ಲಿ ಅಂದರೆ ಭಾರತ, ಮಲಯ, ಶ್ರೀಲಂಕಾಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಕರ್ನಾಟಕದ ಪಶ್ಚಿಮ ಕರಾವಳಿಯಲ್ಲಿ ಇದು ಸಾಮಾನ್ಯ. ಇದರ ಎಲೆಗಳು ಸರಳ; ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಗಳ ಆಕಾರ ಈಟಿಯಂತೆ. ಇದು ಏಪ್ರಿಲ್, ಮೇ ತಿಂಗಳಲ್ಲಿ ಹೂ ಬಿಡುತ್ತದೆ. ಹೂವಿನ ಬಣ್ಣ ಬಿಳಿ. ಒಂದೊಂದರಲ್ಲೂ ನಾಲ್ಕು ದೊಡ್ಡ ದಳಗಳುಂಟು. ಹೂವಿನ ಕೇಂದ್ರ ಭಾಗದಲ್ಲಿ ಅರಿಶಿಣ ಬಣ್ಣದ್ದು ಆರು ಕೇಸರಗಳ ಗುಚ್ಫವಿದೆ. ಹೂಗಳಿಗೆ ಒಳ್ಳೆಯ ವಾಸನೆಯುಂಟು. ಹೂ ಅರಳಿದಾಗ ಬಲು ದೂರದವರೆಗೆ ಈ ಸುವಾಸನೆ ಹಬ್ಬಿರುತ್ತದೆ. ಹೊಸ ಎಲೆಗಳ ಬಣ್ಣ ರಕ್ತ ಕೆಂಪು. ಅವು ಬಲಿತಂತೆ ಗುಲಾಬಿ ಬಣ್ಣಕ್ಕೆ ತಿರುಗಿ ಅನಂತರ ಹಸಿರು ಬಣ್ಣವನ್ನು ತಳೆಯುವುವು. ಇದರಿಂದ ಮರ ಸುಂದರವಾಗಿಯೂ ಆಕರ್ಷಕವಾಗಿಯೂ ಕಾಣುತ್ತದೆ. ನಾಗಸಂಪಿಗೆಯನ್ನು ಅಲಂಕಾರಕ್ಕೆಂದು ಉದ್ಯಾನಗಳಲ್ಲಿ ಬೆಳೆಸುವುದಿದೆ. ಹೀಗೆ ಬೆಳೆಸಿದ ಮರಗಳನ್ನು ಬೌದ್ಧ ದೇವಾಲಯಗಳಲ್ಲೂ ಕಾಣಬಹುದು. ನಾಗಸಂಪಿಗೆಯನ್ನು ಬೀಜಗಳ ಮೂಲಕ ವೃದ್ಧಿಸಲಾಗುವುದು. ಬೀಜಗಳನ್ನು ಅಪೇಕ್ಷಿತ ಸ್ಥಳಗಳಲ್ಲಿ ಬಿತ್ತುವುದೇ ಕ್ರಮ. ಒಂದೆಡೆ ಬಿತ್ತಿ ಸಸಿ ಪಡೆದು ಬೇರೆಡೆ ನಾಟಿ ಮಾಡಲು ಆಗುವುದಿಲ್ಲ. ಅಲ್ಲದೇ ಹೊಸ ಬೀಜಗಳನ್ನೇ ಬಿತ್ತಲಾಗುತ್ತದೆ.

ನಾಗಸಂಪಿಗೆಯ ಹೂಗಳಿಂದ ಸುವಾಸನೆ ಇರುವ ಎಣ್ಣೆಯನ್ನು ತೆಗೆಯಬಹುದು. ಅದರ ಬಣ್ಣ ಹಳದಿ. ಬೀಜದಿಂದಲೂ ಎಣ್ಣೆಯನ್ನು ಪಡೆಯುವುದುಂಟು. ಇದರಿಂದ ತಯಾರಿಸಿದ ಮುಲಾಮು, ಎಣ್ಣೆಗಳನ್ನು ಆಯುರ್ವೇದ, ಸಿದ್ಧ, ಯುನಾನಿ ಔಷಧಗಳಲ್ಲಿ ಬಳಸುವುದಿದೆ. ಒಣಗಿದ ಹೂವಿನ ಪುಡಿಯನ್ನು ಸಕ್ಕರೆ, ಬೆಣ್ಣೆ ಇಲ್ಲವೆ ತುಪ್ಪದೊಂದಿಗೆ ಚೆನ್ನಾಗಿ ಬೆರೆಸಿ ಮೂಲವ್ಯಾಧಿ ಹಾಗೂ ಆಮಶಂಕೆಯಾದಾಗ ಔಷಧಿಯಾಗಿ ಕೊಡುವ ಕ್ರಮವುಂಟು. ನಾಗಸಂಪಿಗೆಯ ಚೌಬೀನೆಯನ್ನು ರೈಲ್ವೇ ಸ್ಲೀಪರುಗಳ ಹಾಗೂ ಭಾರಿ ಯಂತ್ರೋಪಕರಣಗಳನ್ನು ಕೂರಿಸುವ ಪೀಠಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. 		
		(ಡಿ.ಜಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ